ಪೈಕ -
ಲ್ಯಾಗೋಮಾರ್ಫ ಗಣದ ಓಕೊಟಾನಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಮೊಲ, ಕುಂದಿಲಿಗಳ ಹತ್ತಿರ ಸಂಬಂಧಿ. ಓಕೊಟೋನ ಇದರ ವೈಜ್ಞಾನಿಕ ಹೆಸರು. ಇದರ 12 ಪ್ರಭೇದಗಳು ಏಷ್ಯದಲ್ಲಿಯೂ 2 ಪ್ರಭೇದಗಳು ಉತ್ತರ ಅಮೆರಿಕದಲ್ಲಿಯೂ ಕಾಣಸಿಗುವುವು. ರಷ್ಯ, ಕೊರಿಯ, ಇರಾನ್, ಆಫ್ಘಾನಿಸ್ತಾನ, ತುರ್ಕಿ, ಮಂಗೋಲಿಯ, ಟಿಬೆಟುಗಳಲ್ಲಿ ಈ ಪ್ರಾಣಿ ಉಂಟು. ಭಾರತದಲ್ಲಿ ಇಲ್ಲ, ಪ್ರಿನ್ಸಿಪ್ ಪ್ರಭೇದ ಅಮೆರಿಕದ ಊಟಾ ಪ್ರಾಂತ್ಯದ ರೌಕಿ ಪರ್ವತ ಶ್ರೇಣಿ ನ್ಯೂ ಮೆಕ್ಸಿಕೋ ಹಾಗೂ ಕ್ಯಾಲಿಫೋರ್ನಿಯದ ಸಿಯೆರ ನಿವೇಡಗಳಲ್ಲೂ ಕಾಲರಿಸ್ ಪ್ರಭೇದ ನೈಋತ್ಯ ಅಲಾಸ್ಕ ಹಾಗೂ ಯೂಕಾನುಗಳಲ್ಲೂ ಇವೆ. 
ಪೈಕ ಸುಮಾರು 125-300 ಮಿ.ಮೀ. ಉದ್ದದ ಪ್ರಾಣಿ. ತೂಕ 125-400 ಗ್ರಾಮ್. ಬಾಲ ಇಲ್ಲ. ದೇಹದ ಮೇಲೆ ದಟ್ಟ, ಉದ್ದ ಮತ್ತು ಮೃದು ತುಪ್ಪುಳ ಉಂಟು. ಬಣ್ಣ ಬೂದು ಮಿಶ್ರಿತ ಕಂದು. ಕೆಲವು ಪ್ರಭೇದಗಳಲ್ಲಿ ಬೇಸಗೆ ಹಾಗೂ ಚಳಿಗಾಲಗಳಲ್ಲಿ ಬಣ್ಣ ಬದಲಾಗುವುದುಂಟು. ತಲೆ ಮೋಟು. ಕಿವಿಗಳು ಗುಂಡು. ಮೂಗಿನ ಹೊಳ್ಳೆಗಳು ಮುಚ್ಚಿಕೊಳ್ಳುವಂತಿವೆ. ಕಾಲುಗಳು ಮೊಟಕು. 

ಬಂಡೆ, ಬಿರುಕುಗಳಲ್ಲಿ ಇವುಗಳ ವಾಸ. ತಮ್ಮ ಮೆಚ್ಚಿನ ಆಹಾರವಾದ ಹುಲ್ಲು, ಗಿಡಗೆಂಟೆ, ಜೊಂಡು ಮುಂತಾದ ಸಸ್ಯಪದಾರ್ಥಗಳನ್ನು ತಿನ್ನುತ್ತ ಮುಂಜಾನೆ ಹಾಗೂ ಸಾಯಂಕಾಲಗಳಲ್ಲಿ ಚಟುವಟಿಕೆಯಿಂದ ಓಡಾಡುವುವು. ಇವುಗಳಲ್ಲಿ ಕೆಲವು ವಿಚಿತ್ರ ಲಕ್ಷಣಗಳನ್ನು ಕಾಣಬಹುದು. ಉದಾಹರಣೆಗೆ ತಾವು ತಿನ್ನಬಹುದಾದ್ದಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಹುಲ್ಲು ಮುಂತಾದವನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿ ಒಣಮೇವನ್ನಾಗಿ ಪರಿವರ್ತಿಸುವುವು. ಚಳಿಗಾಲದಲ್ಲಿ ಆಹಾರ ಪೂರೈಕೆಗೆ ಕೊರತೆಯುಂಟಾದಾಗ ಈ ಮೇವನ್ನು ತಿನ್ನುತ್ತವೆ. ಇವು ರಾತ್ರಿ ವೇಳೆ ಹಾಕುವ ಹಿಕ್ಕೆ ಕಪ್ಪು ಬಣ್ಣದ್ದೂ ಸ್ನಿಗ್ಧವೂ ಆಗಿದ್ದು ಇದರ ಸುತ್ತ ಜೆಲ್ಲಿಯಂಥ ಪೊರೆ ಇರುವುದು. ಈ ಹಿಕ್ಕೆಯನ್ನು ಇವು ತಿನ್ನುತ್ತವೆ. ಹಿಕ್ಕೆಯಲ್ಲಿರಬಹುದಾದ ಜೀವಸತ್ತ್ವ ದೇಹಕ್ಕೆ ನಷ್ಟವಾಗಿ ಹೋಗದಂತೆ ನಿಸರ್ಗ ವಿಧಿಸಿರುವ ನಿಯಮ ಇದಾಗಿರಬಹುದು. 

ಪೈಕ ವರ್ಷಕ್ಕೆ 2-3 ಬಾರಿ ಮರಿ ಹಾಕುತ್ತದೆ. ಒಂದು ಸಲಕ್ಕೆ 3-4 ಮರಿಗಳು ಹುಟ್ಟುತ್ತವೆ. ಮರಿಗಳು ದೊಡ್ಡವಾಗಿ ಸ್ವತಂತ್ರ ಜೀವನ ನಡೆಸಲು 6-8 ವಾರ ಬೇಕು. ಪೈಕದ ಆಯಸ್ಸು 1-3 ವರ್ಷ.
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ